ಜ್ವಾಲಕ -
	ವಾಯುವಿನೊಡನೆ ದ್ರವ ಇಂಧನವನ್ನು ಮಿಶ್ರಮಾಡಿ ಉರಿಸಲು ಬಳಸುವ ಉಪಕರಣ (ಬರ್ನರ್), ದ್ರವ ಮತ್ತು ಅನಿಲ ಉರುವಲುಗಳನ್ನು ಉಪಯೋಗಿಸುವ ಜ್ವಾಲಕಗಳು ಸಾಮಾನ್ಯವಾದರೂ ಪುಡಿಮಾಡಿರುವ ಕಲ್ಲಿದ್ದಲನ್ನು ವಾಯುವಿನೊಡನೆ ಮಿಶ್ರ ಮಾಡಿ ಜ್ವಲಿಸುವ ಜ್ವಾಲಕಗಳೂ ಇವೆ. ಅನಿಲ ಮತ್ತು ವಾಯುವಿನ ಮಿಶ್ರಣ ಮಾಡುವುದು ಸುಲಭ. ಆದ್ದರಿಂದ ಅನಿಲ ಉರುವಲನ್ನು ಉಪಯೋಗಿಸುವ ಜ್ವಾಲಕದ ಸ್ಥೂಲಕಲ್ಪನೆ ಸರಳವಾದದ್ದು. ಕಣಿತ್ರದಿಂದ ದ್ರವವನ್ನು ತುಂತುರುಗಳಾಗಿ ಎರಚಿದರೆ ದ್ರವ ಉರುವಲು ಜ್ವಾಲಕವೂ ಅನಿಲ ಜ್ವಾಲಕದಷ್ಟೇ ದಕ್ಷವಾದದ್ದಾಗಿರುತ್ತದೆ. ದೀಪಗಳಾಗಿ ಬಳಸುವ ಸಾಮಾನ್ಯ ಜ್ವಾಲಕಗಳ ಹೊರತು ಅವುಗಳ ಉಪಯೋಗವನ್ನು ಅವಲಂಬಿಸಿ ಅನೇಕ ಮಾದರಿಯ ಜ್ವಾಲಕಗಳಿವೆ.

	ಬುನ್ಸೆನ್ ಜ್ವಾ.ಲಕ: ಪ್ರಯೋಗಶಾಲೆಯಲ್ಲಿ ಬಿಸಿ ಮಾಡಬೇಕಾದ ಯಾವುದೇ ಕೆಲಸಕ್ಕೆ ಬುನ್ಸೆನ್ ಜ್ವಾಲಕವನ್ನು ಹೊತ್ತಿಸುತ್ತಾರೆ. ಇದು ಪೆಟ್ರಲ್ ಅಥವಾ ದ್ರಾವಕ ಎಣ್ಣೆಗಳು ಮತ್ತು ಇತರ ಅನಿಲಗಳಿಂದ ಹೊತ್ತುವುದು. ಜ್ವಾಲಕದ ಕೊಳವೆ ಕಬ್ಬಿಣ ಅಥವಾ ಹಿತ್ತಾಳೆಯ ವಸ್ತು. ಕೊಳವೆಯ ಕೆಳಭಾಗದಲ್ಲಿ ತಾಂತ್ರಿಕ ರಚನೆ ಉಂಟು. ಕೊಳವೆಯ ಅಡಿಯಲ್ಲಿ ಒಂದು ಪ್ರಧಾರೆ (ಂ) ಇದೆ. ಅದರ ಮುಖಾಂತರ ಅನಿಲೇಂಧನವು ಕೊಳವೆಯನ್ನು ಪ್ರವೇಶಿಸುವುದು. ಅದರ ಸುತ್ತಲೂ ರಂಧ್ರವುಳ್ಳ ಒಂದು ಪುಟ್ಟ ಕೊಳವೆ ಇದೆ (ಃ). ಇದಕ್ಕೆ ವಾಯು ನಿಯಾಮಕ ಇಂದು ಹೆಸರು. ರಂಧ್ರಗಳ ಮುಖಾಂತರ ವಾಯು ಒಳಪ್ರವೇಶಿಸುವುದು. ವಾಯು ನಿಯಾಮಕವನ್ನು ತಿರುಗಿಸಿ ಉರಿಯುವ ಅನಿಲಕ್ಕೆ ಮಿಶ್ರ ಮಾಡಲು ಎಷ್ಟು ಬೇಕೋ ಅಷ್ಟು ವಾಯುವನ್ನು ಬಿಡಬಹುದು. ಪ್ರಾಯೋಗಿಕವಾಗಿ, ಒಂದು ಗಾತ್ರ ಅನಿಲಕ್ಕೆ 2 1/2 ಗಾತ್ರದಷ್ಟು ವಾಯುವನ್ನು ಸೇರಿಸಬೇಕಾಗುವುದು. ಬುನ್ಸೆನ್ ಜ್ವಾಲಕ ಅಸಂದೀಪ್ತ ಮತ್ತು ಸಂದೀಪ್ತ ಜ್ವಾಲೆಗಳನ್ನು ಕೊಡಬೇಕಾದರೆ ವಾಯುವಿನ ಮೊತ್ತವನ್ನು ಕಡಿಮೆ ಅಥವಾ ಜಾಸ್ತಿ ಮಾಡಲು ರಂಧ್ರಗಳನ್ನು ಮುಚ್ಚಲು ಇರುವ ಲೋಹದ ಮುಚ್ಚಳವನ್ನು ತಿರುಗಿಸುವುದರಿಂದ ಸಾಧ್ಯ. ರಂಧ್ರವನ್ನು ಮುಚ್ಚುವುದರಿಂದ ಜ್ವಾಲೆ ಸಂದೀಪ್ತವಾಗುವುದು. ರಂಧ್ರವನ್ನು ಪೂರ್ಣ ತೆರೆದರೆ, ಅನಿಲಕ್ಕೆ ಸಾಕಷ್ಟು ವಾಯು ಪ್ರವೇಶಿಸಿ ಮಿಶ್ರವಾಗಿ ಜ್ವಾಲೆ ಅಸಂದೀಪ್ತವಾಗುವುದು. ಪೆಟ್ರೊಲಿನಲ್ಲಿರುವ ಹೈಡ್ರೋಕಾರ್ಬನ್‍ಗಳು ಅಥವಾ ಹೈಡ್ರೋಜನ್ ಅಥವಾ ಇಂಗಾಲದ ಅನಿಲಗಳ ಪೂರ್ಣ ದಹನ ಸಾಧ್ಯವಾಗಿ ಭಾಗಶಃ ಹೊಗೆ ಇಲ್ಲದ ನೀಲಿ ಜ್ವಾಲೆ ಪ್ರಜ್ವಲಿಸುವುದು. ಇದರಲ್ಲಿ ಹೆಚ್ಚು ಉಷ್ಣತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಇಂಥ ಜ್ವಾಲಕಗಳಿಗೆ ಮೇಲೆ ಕೆಳಗೆ ಸರಿದಾಡಬಲ್ಲ ಲೋಹದ ಉಂಗುರವನ್ನು ಮೇಲ್ಗಡೆ ಜೋಡಿಸುತ್ತಾರೆ. ಆಗ ಜ್ವಾಲೆ ಲಂಬಾಕೃತಿ ತಳೆಯುವುದರ ಬದಲು ಹಲವು ಸಣ್ಣ ಸಣ್ಣ ನೀಲಿ ಜ್ವಾಲೆಗಳಾಗಿ ಮಾರ್ಪಾಡಾಗುವುದು. ಈ ಎರಡೂ ತರಹದ ಜ್ವಾಲಕಗಳನ್ನು ಪ್ರಯೋಗ ಶಾಲೆಯಲ್ಲಿ ಉಪಯೋಗಿಸುವರು. ಬೀಕರಿನಲ್ಲಿ ಅಥವಾ ಬುದ್ದಲಿಯಲ್ಲಿರುವ ದ್ರವವನ್ನೂ ನೀರಿನ ಅಥವಾ ಮರಳಿನ ತೊಟ್ಟಿಗಳನ್ನೂ ನೀರಿನ ಒಲೆಗಳನ್ನೂ ಬಿಸಿ ಮಾಡಲು ಜ್ವಾಲಕದ ಬಳಕೆ ಉಂಟು.

	ಬುನ್ಸೆನ್ ಜ್ವಾಲೆ ಶÀಂಕುವಿನ ಆಕಾರದಲ್ಲಿ ಇರುವುದು, ಸಾಧಾರಣ ಎಲ್ಲ ಜ್ವಾಲೆಗಳಂತೆಯೇ ಬುನ್ಸೆನ್ ಜ್ವಾಲಕದ ಜ್ವಾಲೆಯಲ್ಲಿ ಎರಡು ಪ್ರದೇಶಗಳಿವೆ. ಒಳ ಪ್ರದೇಶದಲ್ಲಿ (ಛಿ) ಕಾಸಿದ ಆದರೆ ಅಪೂರ್ಣ ದಹಿಸಿದ ಅನಿಲ ಉಂಟು. ಇದರ ಕೇಂದ್ರದಲ್ಲಿ ಜ್ವಲನವಿಲ್ಲ. ಉಷ್ಣತೆ ಬಲು ಕಡಿಮೆ. ಹೊರ ಪ್ರದೇಶದಲ್ಲಿ (ಆ) ಆಕ್ಸಿಜನ್ ಹೆಚ್ಚು. ಅನಿಲ ಪೂರ್ಣ ದಹಿಸುವುದು. ಇಲ್ಲಿ ಉಷ್ಣತೆಯೂ ಬಲು ಹೆಚ್ಚು. ಹೊಳೆಯುವ ತಾಮ್ರದ ತಂತಿಯೊಂದನ್ನು ಜ್ವಾಲೆಗೆ ಅಡ್ಡ ಹಿಡಿದರೆ,  ಹೊರಪ್ರದೇಶದಲ್ಲಿ ತಾಮ್ರದ ಆಕ್ಸೈಡಿನ ಕಪ್ಪುಬಣ್ಣದ ಒತ್ತರ ಹೆಚ್ಚುತ್ತಿರುವುದು ಗೋಚರವಾಗುತ್ತದೆ. ಅದೇ ವೇಳೆ ಮಧ್ಯಭಾಗದಲ್ಲಿ ತಾಮ್ರ ಹೊಳೆಯುತ್ತಿರುತ್ತದೆ. ಕಪ್ಪಾಗಿರುವ ಬಾಗವನ್ನು ಒಳಪ್ರದೇಶದಲ್ಲಿಟ್ಟರೆ ಅದು ತನ್ನ ಕಪ್ಪು ಬಣ್ಣವನ್ನು ಕಳೆದುಕೊಳ್ಳುವುದು. ಅಂದರೆ ತಾಮ್ರದ ಆಕ್ಸೈಡು ತಾಮ್ರವಾಗಿ ಆಕ್ಸಿಜನ್ನನ್ನು ಅನಿಲ ದಹನಕ್ಕೆ ಒದಗಿಸುವುದು. ಹೊರ ಪ್ರದೇಶವನ್ನು ಉತ್ಕರ್ಷಣ ಜ್ವಾಲೆ ಎಂದೂ ಒಳಪ್ರದೇಶವನ್ನು ಅಪಕರ್ಷಣ ಜ್ವಾಲೆ ಎಂದೂ ಕರೆಯುತ್ತಾರೆ.

	ಮೇಕರ್ ಜ್ವಾಲಕ : ಬುನ್ಸೆನ್ ಜ್ವಾಲಕದಲ್ಲಿ ಅನಿಲ ಮತ್ತು ವಾಯುವನ್ನು ಮಿಶ್ರ ಮಾಡುವ ಹಾಗೆಯೇ ಇದರಲ್ಲೂ ಮಾಡುವರು. ಆದರೆ ಇದಕ್ಕೆ ವಿಕಸಿತ ಮೇಲ್ಭಾಗವೂ ಮಿಶ್ರಕ ತಲೆಯೂ ಇದೆ. ಮಿಶ್ರಣವು ಮೇಲ್ಭಾಗದಲ್ಲಿರುವ ಹಲವು ರಂಧ್ರಗಳ ಮುಖಾಂತರ ಹೊರಹೊಮ್ಮಿ ಜ್ವಲಿಸುವುದು. ನೀಲಿ ಜ್ವಾಲೆಗಳು ಹಲವು ಮತ್ತು ಅವು ಸಣ್ಣಗಿರುತ್ತವೆ. ಇದರಿಂದಾಗಿ ಉಷ್ಣತೆ ಅತಿ ಹೆಚ್ಚು (2000 (ಅ). ಇದರ ಕೆಲವು ನವೀನ ಮಾದರಿಗಳು ಮಾರುಕಟ್ಟೆಯಲ್ಲಿ ದೊರೆಯುವುವು.

	ಮೀನಿನ ಬಾಲದಂತಿರುವ ಜ್ವಾಲಕ :  ಹೆಸರೇ ಸೂಚಿಸುವಂತೆ ಇದು ಮೀನಿನ ಬಾಲದಾಕಾರದ ಅಥವಾ ಬಾವಲಿಯ ರೆಕ್ಕೆಯಾಕಾರದ ಜ್ವಾಲೆಯನ್ನು ಕೊಡುತ್ತದೆ. ಗಾಜಿನ ನಳಿಕೆಯನ್ನು ಬಗ್ಗಿಸಲು ಇದನ್ನು ಉಪಯೋಗಿಸುವರು. ಅನಿಲದ ಅಪೂರ್ಣ ದಹನದಿಂದ ಉತ್ಪತ್ತಿಯಾಗುವ ಇಂಗಾಲದ ಸೂಕ್ಷ್ಮಕಣಗಳು ಪ್ರಜ್ವಲಿಸುವ ರೂಪದಲ್ಲಿರುವುದರಿಂದ ಇದರ ಜ್ವಾಲೆ ಸಂದೀಪ್ತವಾಗಿರುವುದು.

	ಊದುಕೊಳವೆ ಜ್ವಾಲಕ: ಗಂಧಕವಿರುವ ಅದುರು ಮತ್ತು ಅಂತಹುದೇ ಅದುರುಗಳನ್ನು ಸುಡಲು ಉಪಯೋಗಿಸುವ ಜ್ವಾಲಕ. ಸಾಮಾನ್ಯವಾಗಿ ಉದ್ದವಾದ ತಿರುಗುವ ಒಲೆ ಮಾದರಿಯದು. ಗಾಜಿನ ನಳಿಕೆಯನ್ನು ಬಗ್ಗಿಸಲು ಬಳಸುವರು.
(ಪಿ.ಬಿ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ